ರಾಜಗೋಪಾಲಕೃಷ್ಣರಾಯ, ಕಡೇಕಾರು
1885-1953. ಕನ್ನಡ ಅರಣೋದಯ ಕಾಲದ ಪ್ರಸಿದ್ಧ ವಿದ್ವಾಂಸರು, ಪತ್ರಿಕೋದ್ಯಮಿ. ಈ ಶತಮಾನದ ಆರಂಭದ ದಶಕಗಳಲ್ಲಿ ಪ್ರಸಿದ್ಧವಾಗಿದ್ದ `ಶ್ರೀಕೃಷ್ಣಸೂಕ್ತಿ ಎಂಬ ಮಾಸಪತ್ರಿಕೆಯ ಸಂಪಾದಕರಲ್ಲೊಬ್ಬರು (ಇನ್ನೊಬ್ಬರು ಕೆರೋಡಿ ಸುಬ್ಬರಾಯರು). ಇವರು ಉಡುಪಿ ತಾಲ್ಲೂಕಿನಲ್ಲಿ ನಿಡಂಬೂರು ಮಾಗಣೆಗೆ ಸೇರಿದ ಕಡೇಕಾರು ಗ್ರಾಮದಲ್ಲಿ 1885ರಲ್ಲಿ ಜನಿಸಿದರು. ಇವರ ಬಾಲ್ಯದವಿಚಾರ ಹೆಚ್ಚಾಗಿ ತಿಳಿಯದು. ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್ ವರೆಗೆ ವಿದ್ಯಾಭ್ಯಾಸ ನಡೆಸಿದಂತೆ, ಆಗ ಇವರು ಪ್ರಸಿದ್ಧ ಕವಿ ಮುದ್ದಣನ ಅಚ್ಚುಮೆಚ್ಚಿನ ಶಿಷ್ಯರಾಗಿದ್ದಂತೆ ತಿಳಿದುಬರುತ್ತದೆ.

ರಾಜಗೋಪಾಲ ಕೃಷ್ಣರಾಯರ ಹೆಸರು ಕನ್ನಡನಾಡಿಗೆ ಪರಿಚಿತವಾದದ್ದು. ಇವರು ಶ್ರೀಕೃಷ್ಣಸೂಕ್ತಿಮಾಸಪತ್ರಿಕೆಯ ಸಂಪಾದಕರಾದ ಅನಂತರ, ಇವರ ಬಂಧುಗಳಾದ ಕೆರೋಡಿ ಸುಬ್ಬರಾಯರು 1906 ರಲ್ಲಿ ಶ್ರೀಕೃಷ್ಣಸೂಕ್ತಿ ಮಾಸಪತ್ರಿಕೆಯನ್ನು ಆರಂಭಿಸಿ ಒಂದು ವರ್ಷ ಕಾಲ ನಡೆಸಿದರು. ಸು. 1907 ರಲ್ಲಿ ಈ ಮಾಸಪತ್ರಿಕೆಯ ಸಂಪಾದಕರಲ್ಲೊಬ್ಬರಾಗಿ ಪತ್ರಿಕೋದ್ಯಮ ರಂಗವನ್ನು ಪ್ರವೇಶಿಸಿದ ರಾಜಗೋಪಾಲಕೃಷ್ಣರಾಯರು ಪತ್ರಿಕೆಯನ್ನು ಬೆಳೆಸುವಲ್ಲಿ ಬಹುವಾಗಿ ಶ್ರಮಿಸಿದರು. ಕೆರೋಡಿ ಸುಬ್ಬರಾಯ ಸಂಪಾದಕರಲ್ಲೊಬ್ಬರಾಗಿದ್ದರೂ ಪತ್ರಿಕೆಯ ಹೆಚ್ಚಿನ ಜವಾಬ್ದಾರಿ ಕೃಷ್ಣರಾಯರದಾಗಿತ್ತು. ಈ ಪತ್ರಿಕೆಯನ್ನು ಇವರು ಒಟ್ಟು ಒಂಭತ್ತು ವರ್ಷಗಳ ಕಾಲ ನಡೆಸಿದರು. ಶ್ರೀಕೃಷ್ಣಸೂಕ್ತಿ ಕನ್ನಡ ನಾಡಿನಲ್ಲಷ್ಟೇ ಅಲ್ಲದೇ ಕನ್ನಡನಾಡಿನಹೊರಗೂ (ಮದರಾಸು ಮತ್ತು ಮುಂಬಯಿ ಪ್ರಾಂತ್ಯಗಳಲ್ಲಿ) ಒಳ್ಳೆಯ ಪತ್ರಿಕೆಯೆಂಬ ಮನ್ನಣೆಗೆ ಪಾತ್ರವಾಗಿತ್ತು. ಈ ಪತ್ರಿಕೆಯಲ್ಲಿ ಇವರು ಬರೆದ ಸಂಪಾದಕೀಯ ಲೇಖನಗಳು ಗಮನಾರ್ಹವಾದುವುಗಳಾಗಿವೆ. ಕೃಷ್ಣರಾಯರು ಕಂಠೀರವ ಎಂಬ ವಾರಪತ್ರಿಕೆಯ ಸ್ಥಾಪನೆಗೂ ಕಾರಣರಾಗಿದ್ದರು. ಕೆಲಕಾಲ ಆ ಪತ್ರಿಕೆಯ ಸಂಪಾದಕರಾಗಿಯೂ ಇವರು ಕೆಲಸ ನಿರ್ವಹಿಸಿದಂತೆ ತಿಳಿದುಬರುತ್ತದೆ.

ರಾಜಗೋಪಾಲಕೃಷ್ಣರಾಯರು ಉತ್ತಮ ಸಾಹಿತಿಯೂ ಹೌದು. ಅನೇಕ ಕಥೆ, ಕವನ, ನಾಟಕಗಳನ್ನು ಬರೆದಿದ್ದಾರೆ. ಇವರು ಉತ್ತಮ ಅನುವಾದಕರೂ ಆಗಿದ್ದರು. ಕನ್ನಡವಲ್ಲದೇ ಇಂಗ್ಲಿಷ್, ಬಂಗಾಲಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಇಂಗ್ಲಿಷ್ ಹಾಗೂ ಬಂಗಾಲಿಯಿಂದ ಅನೇಕ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಹೆಚ್ಚಿನ ಅನುವಾದ ಹಾಗೂ ಸ್ವತಂತ್ರ ಬರೆಹಗಳು ಸುವಾಸಿನಿ, ಶ್ರೀಕೃಷ್ಣಸೂಕ್ತಿ, ಕಂಠೀರವ, ಸ್ವದೇಶಾಭಿಮಾನಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕನ್ನಡ ಸಂಸ್ಕøತಿ, ಭಾಷೆ, ಸಾಹಿತ್ಯಗಳ ಅಭಿವೃದ್ಧಿಯಲ್ಲಿ ಆಸಕ್ತರಾಗಿದ್ದ ಕೃಷ್ಣರಾಯರು ಸಾರ್ವಜನಿಕ ರಂಗದಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದರು. ಅನೇಕ ಸಂಘ ಸಂಸ್ಥೆಗಳ ಜೊತೆ, ಉನ್ನತ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು. ದ್ರಾವಿಡ ಬ್ರಾಹ್ಮಣರ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಅದರ ಕಾರ್ಯಕಲಾಪಗಳಲ್ಲಿ ಇವರು ಭಾಗವಹಿಸಿದ್ದರಲ್ಲದೇ, ಕನ್ನಡ ಸಾಹಿತ್ಯ ಪರಿಷತ್ತಿನ ಆ ಜೀವ ಸದಸ್ಯರಾಗಿದ್ದರು. ಬಂಗಾಲಿ ಭಾಷೆ ಸಾಹಿತ್ಯಗಳ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ವಂಗಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದರು. ಇಂದು ಕನ್ನಡ ನಾಡಿನಲ್ಲಿ ಹೆಸರಾದ ಉಡುಪಿ ಕರ್ಣಾಟಕ ಸಂಘವನ್ನು ಸ್ಥಾಪಿಸಿದವರು ಇವರೇ. ಈ ಸಂಘ ರಾಯರ ಮುಂದಾಳುತ್ವದಲ್ಲಿ 1944 ರಲ್ಲಿ ಸ್ಥಾಪನೆಗೊಂಡಿತು. ಇವರು ಈ ಸಂಘದ ಅಧ್ಯಕ್ಷರಾಗಿ 6 ವರ್ಷಗಳ ಕಾಲ ಅವಿಶ್ರಾಂತವಾಗಿ ದುಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಇವರು ತಮ್ಮ ಪತ್ರಿಕೆಯ ಮೂಲಕ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಲು ನೆರವಾದದ್ದಲ್ಲದೆ, ನೂರಾರು ಜನ ಲೇಖಕರನ್ನು ಕನ್ನಡ ಸಾರಸ್ವತ ಲೋಕಕ್ಕೆ ಶ್ರೀಕೃಷ್ಣಸೂಕ್ತಿಯ ಮೂಲಕ ಪರಿಚಯ ಮಾಡಿಕೊಟ್ಟದ್ದು ವಿಶೇಷ ಉಲ್ಲೇಖಕ್ಕೆ ಪಾತ್ರವಾದ ಸಂಗತಿ.

ಕನ್ನಡದ ಏಳ್ಗೆಗಾಗಿ ತಮ್ಮ ಕಡೆಗಾಲದವರೆಗೂ ದುಡಿದ ಕೃಷ್ಣರಾಯರು 1953 ಅಕ್ಟೋಬರ್ 17ರಂದು ನಿಧನ ಹೊಂದಿದರು. ಇವರನ್ನು ಕುರಿತಂತೆ ಡಾ. ಹಾ. ತಿ. ಕೃಷ್ಣೇಗೌಡ ಅವರು ಕಡೇಕಾರು ರಾಜಗೋಪಾಲ ಕೃಷ್ಣರಾಯರು; ಬದುಕು-ಬರಹ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ (1978).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ